ಬರ್ಮಿಂಗ್‍ಹ್ಯಾಮ್
	 ಇಂಗ್ಲೆಂಡಿನ ಒಂದು ನಗರ, ಕೌಂಟಿ ಬರೊ, ವಾರಿಕ್‍ಪೈರ್ ಕೌಂಟಿಯಲ್ಲಿ ಲಂಡನ್ನಿಗೆ ವಾಯವ್ಯದಲ್ಲಿ 157 ಕಿಮೀ ದೂರದಲ್ಲಿದೆ. ಜನಸಂಖ್ಯೆ 10,58,300 (1978).

	ಇಂಗ್ಲೆಂಡನ್ನು ನಾರ್ಮನ್ ಜನರು ಗೆದ್ದುಕೊಳ್ಳುವುದಕ್ಕೆ ಹಿಂದೆಯೇ ಬರ್ಮಿಂಗ್ ಹ್ಯಾಮ್ ಸ್ಥಾಪಿತವಾಗಿತ್ತು. ತೆರಿಗೆ ವಿಧಿಸಲು ನಾರ್ಮನರು 1086ರಲ್ಲಿ ತಯಾರಿಸಿದ ಡೂಮ್ಸ್-ಡೇ ಬುಕ್ ರೆವೆನ್ಯೂ ಸರ್ವೇಕ್ಷಣೆಯ ಕಡತದಲ್ಲಿ ಇದರ ಹೆಸರಿದೆ. ಪಟ್ಟಣದ ಮೇಲಣ ತೆರಿಗೆಯನ್ನು 20 ಷಿಲಿಂಗ್ ಎಂದು ನಮೂದಿಸಿದೆ. ಬರ್ಮಿಂಗ್ ಹ್ಯಾಮ್ ಇರುವ ನಿವೇಶನದ ಮಾಲೀಕ ವಿಲಿಯಮ್. 1265ರಲ್ಲಿ ಬರ್ಮಿಂಗ್ ಹ್ಯಾಮ್ ಮುಖ್ಯ ಮಾರುಕಟ್ಟೆ ಸ್ಥಳವಾಗಿತ್ತು. ಕಬ್ಬಿಣದ ಗಣಿಗಳು ಇದ್ದಲು ತಯಾರಿಕೆಗೆ ಬೇಕಾದ ಗಟ್ಟಿ ಮರಗಳ ಅರಣ್ಯಗಳೂ ಸಮೀಪದಲ್ಲಿದ್ದ ಕಾರಣ ಬರ್ಮಿಂಗ್‍ಹ್ಯಾಮ್‍ನಲ್ಲಿ ಕೈಗಾರಿಕೆ ಬೆಳೆಯಿತು. 1665ರಲ್ಲಿ ಪ್ಲೇಗ್ ಪಿಡುಗಿನಿಂದ ಇದಕ್ಕೆ ಭಾರಿ ನಷ್ಟವಾಯಿತು. ಇದು 18ನೆಯ ಶತಮಾನದಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯ ಕೇಂದ್ರಗಳಲ್ಲೊಂದು ಬರ್ಮಿಂಗ್‍ಹ್ಯಾಮ್‍ನ ಪ್ರಜೆಗಳಿಗೆ ಮತದಾನ ಹಕ್ಕಿನ ನೀಡಿಕೆಯಾದ್ದು 1832ರಲ್ಲಿ. ನಗರದ ಆಡಳಿತಕ್ಕೆ ಕಾರ್ಪೊರೇಷನ್ ಇದೆ. ಅದರ ಪ್ರಧಾನಾಧಿಕಾರಿಯಾದ ಲಾರ್ಡ್ ಮೇಯರನ ಸ್ಥಾನವನ್ನು ನಿರ್ಮಿಸಲಾದ್ದು 1894ರಲ್ಲಿ. ಎಂಜಿನ್ನನ್ನು ಉಪಜ್ಞೆ ಮಾಡಿದ ಜೇಮ್ಸ್ ವ್ಯಾಟ್, ಅನಿಲ ದೀಪವನ್ನು (ಗ್ಯಾಸ್ ಲೈಟ್) ಉಪಜ್ಞಿಸಿದ ವಿಲಿಯಮ್ ಮುರ್ಡೋಕ್, ಚರಿತ್ರಕಾರ ವಿಲಿಯಮ್ ಹಟ್ಟನ್, ರಸಾಯನವಿಜ್ಞಾನಿ ಜೋಸೆಫ್ ಪ್ರೀಸ್ಟ್‍ಲಿ, ಕಲಾವಿದ ಜಾನ್ ಬ್ಯಾಸ್ಕರ್‍ವಿಲ್ ಮುಂತಾದವರು ಈ ನಗರದ ನಿವಾಸಿಗಳಾಗಿದ್ದರು.

	ಬರ್ಮಿಂಗ್‍ಹ್ಯಾಮ್ ಪ್ರಪಂಚದ ಪ್ರಮುಖ ಕೈಗಾರಿಕಾ ನಗರಗಳಲ್ಲೊಂದು. ಇಲ್ಲಿ ಲೋಹ ಸರಕುಗಳ ತಯಾರಿಕೆ ಪ್ರಧಾನವಾದ್ದು. ಮೋಟಾರು ಕಾರು, ಸ್ಕೂಟರ್, ಸೈಕಲ್, ಎಂಜಿನಿಯರಿಂಗ್ ಸರಕು ಹಗೂ ರಬ್ಬರ್ ಸರಕು ತಯಾರಾಗುತ್ತವೆ. ಒಂದನೆಯ ಮಹಾಯುದ್ಧದ ತರುವಾಯ 1925ರಲ್ಲಿ ನಿರ್ಮಿಸಿದ ಹಾಲ್ ಅಫ್ ವಿಕ್ಟರಿ ಎಂಬ ಸುಂದರ ಸ್ಮಾರಕ ಮಂದಿರವಿದೆ. ನಗರದ ಮಧ್ಯೆ ವಿಕ್ಟೋರಿಯಾ ಚೌಕ ಹಾಗೂ ನಗರಸಭಾ ಕಟ್ಟಡ ಇವೆ. ಈ ಬೃಹತ್ ನಗರಕ್ಕೆ 117 ಕಿಮೀ ದೂರದಲ್ಲಿ ವೇಲ್ಸ್‍ನಲ್ಲಿರುವ ಎರಡು ಸರೋವರಗಳಿಂದ ನೀರು ಪೂರೈಕೆಯಾಗುತ್ತದೆ. ಎರಡನೆಯ ಮಹಾಯುದ್ಧದಲ್ಲಿ ಜರ್ಮನ್ ವಿಮಾನ ದಾಳಿಗಳಿಂದ ನಗರಕ್ಕೆ ಭಾರಿ ನಷ್ಟವಾಯಿತು. ತರುವಾಯ ನಗರ ವಿಸ್ತರಣೆಗೊಂಡಿತು. 1945ರಿಂದ ಬೃಹತ್ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಕೇವಲ 1 ಗಂ.35ನಿಮಿಷಗಳಲ್ಲಿ ಲಂಡನ್-ಬರ್ಮಿಂಗ್‍ಹ್ಯಾಮ್ ನಡುವೆ 160 ಕಿಮೀ ದೂರದ ರೈಲು ಸಂಚಾರ ಸಾಧ್ಯವಿದೆ.

	ಬರ್ಮಿಂಗ್‍ಹ್ಯಾಮ್ ಸಾಂಸ್ಕøತಿಕ ಕೇಂದ್ರ ಕೂಡ. ಇಲ್ಲಿಯ ರಿಪೆರ್ಟರಿ ಥಿಯೇಟರ್ ಸ್ಥಾಪನೆಯಾದ್ದು 1913ರಲ್ಲಿ. ಇಲ್ಲಿಯ ಕಲಾಮಂದಿರದಲ್ಲಿ ಅನೇಕ ಅಮೂಲ್ಯ ತೈಲಚಿತ್ರಗಳಿವೆ. 1779ರಲ್ಲಿ ಸ್ಥಾಪಿಸಿದ ಕೇಂದ್ರಿಯ ಗ್ರಂಥಾಲಯದಲ್ಲಿ 700,000 ಗ್ರಂಥಗಳಿವೆ. ಇಲ್ಲಿರುವ ಮತ್ತೊಂದು ಗ್ರಂಥಾಲಯ ಯೂರೋಪಿನ ಬೃಹತ್ ಗ್ರಂಥಾಲಯಗಳನ್ನು ಹೋಲುತ್ತದೆ. ಇಲ್ಲಿ ಬರ್ಮಿಂಗ್‍ಹ್ಯಾಮ್ ಮತ್ತು ಆಸ್ಟನ್ ವಿಶ್ವವಿದ್ಯಾಲಯಗಳನ್ನು, ಅನೇಕ ಕಾಲೇಜುಗಳು, ಅತ್ಯಂತ ಪ್ರಾಚೀನ ಶಾಲೆಯಾದ ಕಿಂಗ್ ಎಡ್ವರ್ಡ್ ಗ್ರಾಮರ್ ಸ್ಕೂಲ್ (1552), ಇವೆ ಬರ್ಮಿಂಗ್‍ಹ್ಯಾಮಿನ ವಿಮಾನ ನಿಲ್ದಾಣ 1939ರಲ್ಲಿ ಸ್ಥಾಪಿತವಾಯಿತು.

	2 ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಲಬಾಮ ಮತ್ತು ಮಿಷಿಗನ್ ರಾಜ್ಯಗಳಲ್ಲಿ ಈ ಹೆಸರಿನ ಒಂದೊಂದು ನಗರವಿದೆ. ಅಲಬಾಮದ ಬರ್ಮಿಂಗ್‍ಹ್ಯಾಮ್ ನಗರ ಅಪಲೇಚಿಯನ್ ಪರ್ವತ ಶ್ರೇಣಿಯ ದಕ್ಷಿಣ ತುದಿಯ ಜೋನ್ಸ್ ಕಣಿವೆಯ ಬಳಿ ಇದೆ. ಇದೊಂದು ಕೈಗಾರಿಕಾ ಕೇಂದ್ರ. ನಗರ ಪ್ರದೇಶದ ಜನಸಂಖ್ಯೆ 7,39,274 (1970). ನಗರದ ಜನಸಂಖ್ಯೆ 3,00,914. ಇಲ್ಲಿ ವಸತಿ ಸ್ಥಾಪಿತವಾದ್ದು 1813ರಲ್ಲಿ. ಅಮೆರಿಕದ ರೈಲುಮಾರ್ಗಗಳ ಪ್ರಾಮುಖ್ಯದಿಂದ 1871ರಲ್ಲಿ ಈ ಸ್ಥಳ ಸಣ್ಣ ನಗರವಾಯಿತು. ಕಬ್ಬಿಣ ಹಾಗೂ ಕಲ್ಲಿದ್ದಲು ದೊರೆತದ್ದರ ಫಲವಾಗಿ ಇಂಗ್ಲೆಂಡಿನ ಬರ್ಮಿಂಗ್‍ಹ್ಯಾಮ್ ರೀತಿಯಲ್ಲಿ ಇದು ಅಭಿವೃದ್ದಿಗೊಂಡಿದ್ದರಿಂದ ಈ ಪಟ್ಟಣಕ್ಕೂ ಇದೇ ಹೆಸರು ಬಂತು. ಇಲ್ಲಿ ಕಬ್ಬಿಣದ ಸಾಮನುಗಳು, ಯಂತ್ರಗಳು, ಮೋಟಾರು, ವಿಮಾನ, ರಾಸಾಯನಿಕಗಳು ತಯಾರಾಗುತ್ತವೆ. ಇದೂ ಒಂದು ಶಿಕ್ಷಣ ಹಾಗೂ ಸಾಂಸ್ಕøತಿಕ ಕೇಂದ್ರವಾಗಿದೆ. 1960ರ ದಶಕದಲ್ಲಿ ನಾಗರಿಕ ಹಕ್ಕುಗಳ ಬಗ್ಗೆ ಈ ನಗರದಲ್ಲಿ ಕರಿಯರು ಹಾಗೂ ಬಿಳಿಯರ ನಡುವೆ ಘರ್ಷಣೆ ನಡೆಯಿತು. 1962ರಲ್ಲಿ ನಾಗರಿಕ ಹಕ್ಕುಗಳ ಬಗ್ಗೆ ಸುಧಾರಣೆಗಳು ಬಂದುವು.

	ಮಿಷಿಗನ್ ರಾಜ್ಯದಲ್ಲಿರುವ ಬರ್ಮಿಂಗ್‍ಹ್ಯಾಮ್ ಡಿಟ್ರಾಯಿಟ್ ನಗರದ ವಾಯವ್ಯಕ್ಕೆ ರೋಗ್ ನದಿಯ ದಂಡೆಯ ಮೇಲಿದೆ. 1864ರಲ್ಲಿ ಇದು ಗ್ರಾಮವಾಗಿದ್ದು 1932ರಲ್ಲಿ ಪಟ್ಟಣವಾಯಿತು. ಜನಸಂಖ್ಯೆ 26,170 (1970), ಇಲ್ಲಿ ವ್ಯವಸಾಯ ಸಲಕರಣೆಗಳ ತಯಾರಿಕೆ ಪ್ರಧಾನವಾಗಿದೆ. 			
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ